ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಹೆಸರುವಾಸಿಯಾದ ಚಕ್ರವರ್ತಿಗಳಲ್ಲಿ
                                            ನೃಪತುಂಗನೂ ಒಬ್ಬನು. ಇದಕ್ಕೆ ಕೇವಲ ಅವನ ಯುದ್ಧವಿದ್ಯೆಯಲ್ಲಿನ ಪರಿಣತಿ ಕಾರಣವಲ್ಲ. ಕನ್ನಡನಾಡು ಎಂಬ
                                            ಪರಿಕಲ್ಪನೆಯನ್ನು ರೂಪಿಸುವುದರಲ್ಲಿ ಅವನು ವಹಿಸಿದ ಪಾತ್ರ ಹಾಗೂ ಕರ್ನಾಟಕದ ಸಂಸ್ಕೃತಿಗೆ ಅವನು ನೀಡಿದ
                                            ವಿಶಿಷ್ಟ ಕಾಣಿಕೆಗಳು ಈ ಮನ್ನಣೆಗೆ ಕಾರಣವಾಗಿವೆ. ರಾಷ್ಟ್ರಕೂಟ ರಾಜವಂಶಕ್ಕೆ ಸೇರಿದ ನೃಪತುಂಗನು ತನ್ನ
                                            ತಂದೆಯಾದ ಮೂರನೆಯ ಗೋವಿಂದನ ನಂತರ ಪಟ್ಟಕ್ಕೆ ಬಂದನು. ಬರೋಡಾ ಮತ್ತು ಸಂಜಾನಗಳ್ಲಿ ದೊರೆತಿರುವ ತಾಮ್ರಪತ್ರಗಳು,
                                            ಮಣ್ಣೆಯಲ್ಲಿ ಸಿಕ್ಕಿರುವ ಶಿಲಾಶಾಸನ ಹಾಗೂ ಅರೇಬಿಯಾದಿಂದ ಬಂದ ಪ್ರವಾಸಿ ಸುಲೈಮಾನನ ಬರವಣಿಗೆಯು ನೃಪತುಂಗನ
                                            ಆಳ್ವಿಕೆಯನ್ನು ಕುರಿತು ಸಮೃದ್ಧವಾದ ಮಾಹಿತಿಯನ್ನು ಒದಗಿಸುತ್ತವೆ. ಈಗ ಆಂಧ್ರಪ್ರದೇಶದಲ್ಲಿದ್ದು ಮಳಖೇಡ್
                                            ಎಂದು ಕರೆಸಿಕೊಳ್ಳುತ್ತಿರುವ ಮಾನ್ಯಖೇಟವು ಅವನ ರಾಜಧಾನಿಯಾಗಿತ್ತು.
                                    
                                    
                                        ನೃಪತುಂಗನ ಆಳ್ವಿಕೆಯುದ್ದಕ್ಕೂ ಅವನಿಗೆ ತನ್ನ ಸೋದರಮಾವನಾದ ಕಕ್ಕ
                                            ಮತ್ತು ಸಮರ್ಥ ಸೇನಾನಿಯಾದ ಬಂಕೆಯನ ನೆರವು ದೊರಕಿತು. ಹೊರಗಿನ ಮತ್ತು ಒಳಗಿನ ಶತ್ರುಗಳ ಬಾಹುಳ್ಯದಿಂದ
                                            ಅವನ ಆಡಳಿತದ ಮೊದಲ ಹಂತವು ಯುದ್ಧಮಯವಾಗಿತ್ತು. ಅವನ ನೆರೆಹೊರೆಯ ರಾಜರುಗಳಾದ ಗಂಗರು, ಗುರ್ಜರ ಪ್ರತಿಹಾರಿಗಳು
                                            ಮತ್ತು ಪಲ್ಲವರು ಯಾವಾಗಲೂ ಈ ಕಿರಿಯ ದೊರೆಯನ್ನು ಸೋಲಿಸಲು ಹೊಂಚುಹಾಕುತ್ತಿದ್ದರು. ಇಮ್ಮಡಿ ವಿಜಯಾದಿತ್ಯ
                                            ಮತ್ತು ಶಂಕರಗಣರು ಅವನ ಆಂತರಿಕ ಶತ್ರುಗಳಾಗಿದ್ದರು. ಆದರೂ ಗಂಗ ಶಿವಮಾರ, ವೆಂಗಿಯ ವಿಜಯಾದಿತ್ಯ ಮತ್ತು
                                            ಗಂಗ ರಾಚಮಲ್ಲರ(ಕ್ರಿ.ಶ.831) ಮೇಲೆ ನಿರ್ಣಾಯಕವಾದ ಗೆಲುವುಗಳನ್ನು ಪಡೆಯುವುದರ ಮೂಲಕ ನೃಪತುಂಗನು
                                            ತನ್ನ ಸಾಮರ್ಥ್ಯವನ್ನು ಸ್ಪಷ್ಟಪಡಿಸಿದನು. ಆದರೆ ಗಂಗರು ಮತ್ತು ರಾಷ್ಟ್ರಕೂಟರ ನಡುವಿನ ವೈಮನಸ್ಯವು
                                            ಹಾಗೆಯೇ ಮುಂದುವರಿಯಿತು. ನೃಪತುಂಗನ ಮಗಳಾದ ಚಂದ್ರಬಲಬ್ಬೆ ಮತ್ತು ಗಂಗ ರಾಜ ಮೊದಲನೆಯ ಬೂತುಗನ ನಡುವೆ
                                            ನಡೆದ ವಿವಾಹವು ಈ ವೈಷಮ್ಯವನ್ನು ಕೊಂಚ ಕಾಲ ಹಿನ್ನೆಲೆಗೆ ಸರಿಸಿತು.
                                    
                                    
                                        ಅನಂತರ ನೃಪತುಂಗನು ತನ್ನ ಸ್ವಂತ ಮಗನಾದ ಕೃಷ್ಣ ಮತ್ತು ತನ್ನ
                                            ಸೇನಾಧಿಪತಿಯಾಗಿದ್ದ ಬಂಕೆಯನ ಮಗ ಧ್ರುವನ ವಿರೋಧವನ್ನು ಎದುರಿಸಬೇಕಾಯಿತು. ಗುರ್ಜರ ಪ್ರತಿಹಾರ ವಂಶಕ್ಕೆ
                                            ಸೇರಿದ ಮೊದಲನೆಯ ಭೋಜನು ಇನ್ನೊಬ್ಬ ಪ್ರಬಲ ಶತ್ರುವಾಗಿದ್ದನು. ಈ ಎಲ್ಲ ಸಂಘರ್ಷಗಳಲ್ಲಿ ಬಹುಮಟ್ಟಿಗೆ
                                            ಜಯಶಾಲಿಯಾಗಿಯೇ ಉಳಿದಿದ್ದು ನೃಪತುಂಗನ ಸಾಮರ್ಥ್ಯ ಹಾಗೂ ಧೈರ್ಯಗಳಿಗೆ ಸಾಕ್ಷಿಯಾಗಿದೆ. ಇವರಲ್ಲದೆ
                                            ಅಂಗ, ವಂಗ, ಮಗಧ ಮತ್ತು ಮಾಳವ ರಾಜರುಗಳ ಮೇಲೆ ಕೂಡ ಅವನು ವಿಜಯಿಯಾದನೆಂದು ಹೇಳಲಾಗಿದೆ. ನರಲೋಕಚಂದ್ರ
                                            ಮತ್ತು ಸರಸ್ವತೀ ತೀರ್ಥಾವತಾರ ಎನ್ನುವುದು ಅವನ ಅನೇಕ ಬಿರುದುಗಳಲ್ಲಿ ಎರಡು.
                                    
                                    
                                        ನೃಪತುಂಗನ ಆಳ್ವಿಕೆಯು ಕೇವಲ ಯುದ್ಧ ಮತ್ತು ರಕ್ತಪಾತಗಳಿಂದ ತುಂಬಿರಲಿಲ್ಲ.
                                            ಅವನು ಕಲೆ ಹಾಗೂ ಸಂಸ್ಕೃತಿಗಳ ಪೋಷಕನೂ ದಾರ್ಶನಿಕನೂ ಆಗಿದ್ದನು. ಶ್ರೀ ವಿಜಯನ ಕವಿರಾಜಮಾರ್ಗದ ರಚನೆಯಲ್ಲಿ
                                            ಅವನು ವಹಿಸಿದ ಪಾತ್ರವು ಚೆನ್ನಾಗಿ ದಾಖಲೆಯಾಗಿದೆ. ಕನ್ನಡ ಭಾಷೆಯಲ್ಲಿ ಉಪಲಬ್ಧವಾಗಿರುವ ಮೊಟ್ಟಮೊದಲ
                                            ಕೃತಿಯಾದ ಕವಿರಾಜಮಾರ್ಗವು ಅವನಿಂದಲೇ ರಚಿತವಾದುದೆಂದು ನಂಬಲಾಗಿತ್ತು. ಆ ಗ್ರಂಥದ ಆಶಯಗಳಿಗೆ ಚಕ್ರವರ್ತಿಯ
                                            ಸಮ್ಮತಿ ಇತ್ತು ಎನ್ನುವುದು, ಕೃತಿಯೊಳಗಡೆಯೇ ಬರುವ ನೃಪತುಂಗದೇವಾನುಮತ ಎನ್ನುವ
                                            ಮಾತಿನಿಂದ ಗೊತ್ತಾಗುತ್ತದೆ. ಕಾವ್ಯಮೀಮಾಂಸೆ, ವ್ಯಾಕರಣ, ಛಂದಸ್ಸು ಮುಂತಾದ ವಿಷಯಗಳನ್ನು ವಸ್ತುವಾಗಿ
                                            ಹೊಂದಿರುವ ಕವಿರಾಜಮಾರ್ಗವು ಕನ್ನಡ ನಾಡು, ನುಡಿ ಮತ್ತು ನಾಡಿಗರ ಬಗ್ಗೆ ಅನೇಕ ಮಹತ್ವದ ಮಾತುಗಳನ್ನು
                                            ಹೇಳುತ್ತದೆ. ಕನ್ನಡ ಪ್ರದೇಶದ ಭೌಗೋಳಿಕ ಗಡಿಗಳನ್ನು ಕುರಿತ ಮಾಹಿತಿ ಅಂತೆಯೇ ಕನ್ನಡಿಗರು ಮತ್ತು ಕನ್ನಡ
                                            ಭಾಷೆಯ ಸ್ವರೂಪವನ್ನು ಕುರಿತ ಅನೇಕ ಮಾಹಿತಿಗಳು ಇಲ್ಲಿ ವಿಪುಲವಾಗಿ ದೊರೆತಿವೆ. ಅಂತೆಯೇ ಕನ್ನಡ ಸಾಹಿತ್ಯದ
                                            ಪ್ರಾಚೀನತೆ ಹಾಗೂ ಆ ಕಾಲದ ಸಂಸ್ಕೃತಿಯನ್ನು ಅರಿಯಲು ಮತ್ತು ಅರ್ಥ ಮಾಡಿಕೊಳ್ಳಲು ಈ ಪುಸ್ತಕವು ವಿಶಿಷ್ಟ
                                            ಆಕರವಾಗಿದೆ. ಆಧುನಿಕ ವಿದ್ವಂಸರಾದ ಮುಳಿಯ ತಿಮ್ಮಪ್ಪಯ್ಯ, ಎಂ.ಎಂ. ಕಲಬುರ್ಗಿ, ಕೆ.ವಿ.ಸುಬ್ಬಣ್ಣ,
                                            ಶೆಲ್ಡನ್ ಪೊಲಾಕ್, ಷ. ಶೆಟ್ಟರ್ ಮುಂತಾದವರು ಕವಿರಾಜಮಾರ್ಗವನ್ನು ಕನ್ನಡದ ಬಹು ಮುಖ್ಯ ಕೃತಿಗಳಲ್ಲಿ
                                            ಒಂದೆಂದು ಪರಿಗಣಿಸಿದ್ದಾರೆ.
                                    
                                    
                                        ಪ್ರಶ್ನೋತ್ತರ ಮಾಲಿಕೆ ಎಂಬ ಸಂಸ್ಕೃತ ಕೃತಿಯನ್ನು ನೃಪತುಂಗನು
                                            ರಚಿಸಿದನೆಂದು ಹೇಳಲಾಗಿದೆ. ಶಕಟಾಯನನ ಅಮೋಘವೃತ್ತಿ ಎಂಬ ವ್ಯಾಕರಣ, ಮಹಾವೀರಾಚಾರ್ಯನ ಗಣಿತ ಸಾರಸಂಗ್ರಹ,
                                            ಜಿನಸೇನಾಚಾರ್ಯರ ಮಹಾಪುರಾಣ, ಉಗ್ರಾದಿತ್ಯನ ಕಲ್ಯಾಣಕಾರಕ ಮತ್ತು ವಿದ್ಯಾನಂದಿಯ ತತ್ವಾರ್ಥ ಶ್ಲೋಕವಾರ್ಧಿಕ
                                            ಎಂಬ ಕೃತಿಗಳು ನೃಪತುಂಗನ ಆಶ್ರಯದಲ್ಲಿ ರಚಿತವಾದವು. ನೃಪತುಂಗನು ಎಲ್ಲ ಧರ್ಮಗಳಿಗೂ ಸಮಾನವಾದ ಪ್ರೋತ್ಸಾಹವನ್ನು
                                            ನೀಡಿದನು.